Monday, March 13, 2023

ಪಾನೀಯ ಮಾಡಿದ ಪಜೀತಿ!

 ಶಿವ - ಶಿವಾ...! ಈ ಲೇಖನ ಎಲ್ಲ ಬರಿಯೋದು ನನ್ನ ಹವ್ಯಾಸನೇ ಅಲ್ಲ... ಓದೋ ಹವ್ಯಾಸ ಏನೊ ಐತಿ. ಬರೆಯೋದು ಅಂದ್ರೆ ಮೈಯಲ್ಲ ಮುಳ್ಳು. ಆದ್ರೂ ಸಿದ್ದಿ ಕಾಟಕ್ಕೆ ಬರೀತೀನಿ. ನಾನು ಎಸ್ಟ್ ಆಲಸಿ ಅದೇನಿ ಅಂದ್ರ, ಸಿದ್ದಿ ಇರ್ಲಿಲ್ಲ ಅಂದ್ರ ಊಟ ಮಾಡಕೂ ಬೇಜಾರ್ ಮಾಡ್ಕೋತೀನಿ. ಹಂತಾದ್ರಾಗ ೧೫ ದಿನ ಸಿದ್ದಿ ಹಿಂದೆ ಬಿದ್ದ ಮ್ಯಾಲೆ ಈ ಲೇಖನ ಬರ್ಯಾಕತೇನಿ .

ದಿನಾಂಕ್ ೨೪.೦೨.೨೦೨೩
ನನಗೆ ಮತ್ತೆ ಸಿದ್ದಿಗೆ ನನ್ನ ಒಬ್ಬ ಗೆಳತಿಯ ಮಗನ ಹುಟ್ಟುಹಬ್ಬದ ಆಚರಣೆಗೆ ಆಮಂತ್ರಣ ಬಂದಿತ್ತು. ನಮ್ಮ ಜೊತಿ ನನ್ನ ಮತ್ತಿಬ್ಬರು ಗೆಳತಿಯರು ಇದ್ದರು. ಒಟ್ಟು ನಾಲ್ಕು ಜನ ಹೋಗೋದು ಅಂತ ಪ್ಲಾನ್ ಆಗಿತ್ತು. ನಮ್ಮ ಆಫೀಸ್ ಕೆಲಸ ಮುಗಿಯುತ್ತಿದ್ದಂತೆ ಸಿದ್ದಿ ನಮ್ಮನ್ನ ಆಫೀಸ್ ಇಂದ ಪಿಕ್ ಅಪ್ ಮಾಡಿದ್ರು. ಸರಿ ನಮ್ಮ ಸವಾರಿ ಗೂಗಲ್ ಮ್ಯಾಪ್ ತೋರಿಸಿದ್ದ ಕಡೆ ಹೊಂಟಿತು. ದಾರಿಯಲ್ಲೇ ಉಡುಗೊರೆ ಖರೀದಿ ಕೂಡ ಆಯಿತು.


ಲೊಕೇಶನ್ ನೋಡ್ತಾ ನಮ್ಮ ಕಾರು ನಿರ್ಜನ ಜಾಗಕ್ಕೆ ಬಂತು. ಇದೆಂತ ಜಾಗಾದಾಗ ಇಕಿ ಹುಟ್ಟುಹಬ್ಬ ಮಾಡಾಕತಾಳೋ ಮಾರಾಯ...! ಅಂದುಕೊಂಡ್ವಿ. ಆಮೇಲೆ ಮುಂದೆ ಹೋದಂಗ ಲೈಟ್ಸ್ ಕಾಣಾಕ ಶುರುವಾದವು. ನನ್ನ ಒಬ್ಬ ಗೆಳತಿ ಪರಿಮಳ ಖುಷಿ ಇಂದ ಅಲ್ಲೇ ಇರ್ಬೆಕ್ ನಡೀರಿ ಅಂದ್ಲು. ಅಲ್ಲಿ ನೋಡಿದ್ರ ರೋಡ್ ರೋಲರ್ ಕೆಲಸ ಮಾಡತಿದ್ವು. ನಾವಂದ್ವಿ ಅಕಿಗೆ ನಿನ್ನ ಇಲ್ಲೇ ಇಳಸ್ತೇವಿ ನಿನ್ ಪಾರ್ಟಿ ಮುಗಸ್ಕೊಂಡ್ ಬಾ ಅಂತ. ಅಸ್ಟೊತ್ತಿಗೆ ಅಲ್ಲೇ ಒಂದ್ ಸಣ್ಣ ಬ್ಯಾನರ್ ಕಾಣಸ್ತು, ಅದರಲ್ಲಿ ಹುಟ್ಟುಹಬ್ಬದ ಶುಭಾಶಯದೊಂದಿಗೆ ದಾರಿನೂ ತೋರಸಿತ್ತು. 

ಅಂತೂ-ಇಂತೂ ಲೊಕೇಶನ್ ಸಿಕ್ತು. ಆದ್ರ ಜಾಗ ಮಾತ್ರ ಸುಪರೋ-ಸೂಪರ್! ಓಪನ್ ಗಾರ್ಡನ್, ತಣ್ಣನ ಗಾಳಿ. ಹೋಗಿ ಗೆಳತಿಗೆ ಮುಖ ತೋರಸಿ, ಹೈ ಹೇಳಿ ಒಂದ್ ಟೇಬಲ್ ಹಿಡದು ಕೂತ್ಕೊಂಡ್ವಿ. ಈ ಲೇಖನ ಬರೆಯೋಕೆ ಮುಖ್ಯ ಕಾರಣ ಮತ್ತು ಲೇಖನದ ಹಾರ್ಟ್, ಹೃದಯ, ದಿಲ್ ಅಂತಾರಲ್ಲ ಈಗ ಶುರುವಾಯ್ತು ನೋಡ್ರಿ...

"ಹುಟ್ಟುಹಬ್ಬಕ್ಕೆ ಬಂದ ಫ್ಯಾಮಿಲಿಗಳು ಅಲ್ಲಿಲ್ಲಿ ನಿಂತುಕೊಂಡು, ಕುಳಿತುಕೊಂಡು ಮಾತನಾಡುತ್ತಿದ್ದರು. ಎಷ್ಟೋ ಜನ ಹೆಂಡತಿಯರು ಮಕ್ಕಳನ್ನು ಗಂಡನ ಕೈಗೆ ಕೊಟ್ಟು ಸೆಲ್ಫಿ ತಗೋಳೋದರಲ್ಲಿ ತೊಡಗಿಸಿಕೊಂಡಿದ್ರು . ಬಂದ ಜನಕ್ಕೆಲ್ಲ ವೆಲ್ಕಮ್ ಡ್ರಿಂಕ್ ಸರ್ವ್ ಮಾಡುತ್ತಿದ್ದ ಸರ್ವರ್ ಗಳನ್ನ ನೋಡಿ ನಾವು ಖುಷಿ ಇಂದ ವೆಲ್ಕಮ್ ಡ್ರಿಂಕ್ ತಗೊಂಡ್ವಿ. ಹಳದಿ ಬಣ್ಣದ ಪಾನೀಯ. ನಾನು ಇನ್ನೇನು ಎತ್ತಿ ಕುಡಿಬೇಕು ಅಂತ ಬಾಯಿ ಹತ್ರ ಒಯ್ದೆ, ಏನೊ ವಾಸನೆ. ನಾನು ಕುಡೀಲಾರದೆ ನನ್ನ ಗೆಳತಿಯರಿಗೆ ಮತ್ತು ಸಿದ್ದಿಗೆ ಕುಡಿದು ಹೆಂಗೈಯ್ತಿ ಅಂತ ಹೇಳ್ರಿ ಅಂದೆ. ಗೆಳತಿಯರ ಮುಖಗಳು ಪಾನೀಯ ಕುಡಿದ ಮೇಲೆ ವಿಕಾರವಾದವು. ಅದೆಂತ ರೆಸಿಪಿ ಇದ ಕೇಳ್ಬೇಕಿತ್ ನೋಡ್ ಅಂತ ಭಾಗ್ಯ ಅಂದಳು. ಕುಡೀಲಾರದ ಅದನ್ನ ಸುಮ್ಮನೆ ಬಿಟ್ವಿ

 ಒಂದು ನಲವತ್ತೈದು ನಿಮಿಷ ಆಗಿರ್ಬೇಕ್ ಮತ್ತ ಸರ್ವರ್ ಪಾನೀಯ ತಂದ. ಈ ಸಲ ಕೆಂಪಗಾ ಇತ್ತು. ಆದ್ರ ನಾನ್ ಹೆದ್ರಿ ನಂಗ ಬ್ಯಾಡಪ್ಪ ಅಂದೆ. ಭಾಗ್ಯ ಇದನ್ನು ನೋಡೇ ಬಿಡನ ಅಂತ ಒಂದ್ ಗ್ಲಾಸ್ ತಗೊಂಡ್ಲು. ಮತ್ತ ಅದ ಟೇಸ್ಟ್, ಬರೀ ಬಣ್ಣ ಬದಲಿ ಆಗಿತ್ತ. ನನ್ನೆದುರು ಒಬ್ಬ ಗಂಡ (ಮುಖ ನೋಡಿದ್ರ ಗೊತ್ತಾಗ್ತಿತ್ ಮದ್ವಿ ಆಗೇತಿ ಅಂತ) ಸರ್ವರ್ ನ ಕರದು ಪಾನೀಯ ತಗೊಂಡ. ನಾನು ಹೆಂಗ್ ಕುಡಿತಾನಪ ಇಂವ ಅಂತ ಭಾಳ ಲಕ್ಷ ಕೊಟ್ಟ ನೋಡಾಕತ್ತಿದ್ದೆ. ನನ್ನ ಗೆಳತಿಯರಿಗೆ ಮತ್ತ ಸಿದ್ಧಿಗೂ ನೋಡಾಕ್ ಹೇಳ್ದೆ. ಒಂದ್ ಗುಟುಕು ಕುಡದ ಅದ ವಿಕಾರ ಮುಖ ಮಾಡಿ ಅಂವ ಅಬ್ಬಾ ಏನೋಪಾ ಇದ...! ಕೆಟ್ಟದಾಗೈತಿ ಅಂದ. ನಮಗೋ ನಗು ತಡ್ಯಾಕ ಅಗ್ವಾಲ್ತ್ . ಅವನ ಮುಂದ ಒಂದ್ ೮ ಹೆಜ್ಜಿ ಇಟ್ರಾ ಕಸದ ಬುಟ್ಟಿ ಇತ್ತ. ಅಲ್ಲಿ ಹಾಕಾಕ್ ಎರಡು ಹೆಜ್ಜಿ ಬಂದ್ ನಿಂತ್ಕೊಂಡ. ನಾನ್ ಏನಾತಪ ಇವಂಗ ಅನ್ಕೊಂಡೆ. ವಾಪಸ್ ಹೋಗಿ ದೂರ ಕುಂತಿದ್ದ ತನ್ನ ಹೆಂಡತಿಗೆ ಕೊಟ್ಟ. ಅಕಿ ಖುಷಿ ಲೇ ಕುಡದ ಬಿಟ್ಲ. ನಾನು ಅನ್ಕೊಂಡೆ ಬಪ್ಪರೇ ಬಹದ್ದೂರ ಗಂಡ! ಅಂತ. ನನ್ನ ಫ್ರೆಂಡ್ ಗೆ ಅಂದೆ ಬಾಲೆ ಹೋಗಿ ಅಕಿಗೆ ಹೇಳೋಣಾಂತ. ಮತ್ತ ಬ್ಯಾಡ ಬಿಡ್ ಅವನೌನ ನಾವ್ಯಾಕೆ ಜಗಳ ಹಚ್ಚುದ ಅಂತ ಬಿಟ್ವಿ. ಆದ್ರ ನೆನಸ್ಕೊಂಡ್ ಕಣ್ಣಾಗ ನೀರ್ ಬರೂಹಂಗ ನಕ್ಕೆವಿ. ಅಂತಾದ ಏನ್ ಸಿಟ್ಟಿತ್ತೋ ಆ ಪುಣ್ಯಾತ್ಮಗ ಅಕಿ ಮ್ಯಾಲೆ ಅಂತ!!
.........

No comments: