Showing posts with label kannada. Show all posts
Showing posts with label kannada. Show all posts

Tuesday, July 8, 2025

ನಂಬಿಕೆ - ಮೂಢನಂಬಿಕೆ

 ನಾನು ಸಣ್ಣವಳಿದ್ದಾಗ ಯಾರಾದ್ರೂ ಹಂಗ ಮಾಡ್ಬಾರ್ದು, ಹಿಂಗ ಮಾಡ್ಬಾರ್ದು ಅಂತ ಹೇಳಿದಾಗ ನನ್ನ ಸಹಜವಾದ ಪ್ರಶ್ನೆ ಯಾಕೆ ಅಂತ ಅವರು ಎದುರಿಸಬೇಕಾಗಿತ್ತು. ಕೆಲವೊಂದಿಷ್ಟು ಜನ ಅದಕ್ಕೆ ಹೊಂದುವ ಉತ್ತರ ಕೊಟ್ರ, ಇನ್ನು ಕೆಲವು ಜನ ಯಾಕಂದ್ರ ದೊಡ್ಡವರ ಹೇಳ್ಯಾರ್ ಅದಕ ಅಂತಿದ್ದರು. ಅದ್ರ ಸರಿ ಕಾರಣ ಇರ್ಲಾರ್ದ ಏನರ ಅನುಸರಿಸು ಅಂದ್ರ ನನಗ ಟ್ರಸ್ ಆಗ್ತೇತಿ. ಅದ್ಯಾಕ ಹಂಗ ಅಂತ ತಿಳ್ಕೊಳೋ ವರೆಗೂ ಸಮಾಧಾನ ಆಗಲ್ಲ. ಈ ಕಾರಣಕ್ಕಾಗೇ ಎಲ್ಲರೂ ನಂಗ ಮೊಂಡು ಹುಡಗಿ, ಹೇಳಿದ್ ಅರ್ಥ ಮಾಡ್ಕೊಳಂಗಿಲ್ಲ, ಉಲ್ಟಾ ಪ್ರಶ್ನೆ ಮಾಡತಾಳ ಅಂತ ಬೈತಾರ್.

ಆದರೆ ಯೋಚನೆ ಮಾಡಿ ನೋಡಿದ್ರ ಪ್ರಶ್ನೆ ಮಾಡೋದು ತಪ್ಪಲ್ಲ, ತಿಳ್ಕೊಳೋ ಕುತೂಹಲ ಇರೋದಕ್ಕ ಪ್ರಶ್ನೆ ಮಾಡ್ತಾರ. ನಾವು ಮಾಡೋ ಪ್ರತಿ ಕೆಲಸಕ್ಕೂ ಒಂದು ಕಾರಣ/ಉದ್ದೇಶ ಇದ್ದ ಇರತೇತಿ. ಅದನ ತಿಳ್ಕೋಲಾರ್ದ ಮಾಡತೇವಿ ಅಂದ್ರ ಇದರರ್ಥ ಬ್ಯಾರೆದವರ ಮಾತ ಕೇಳತೀವಿ. ಸ್ವಂತ ಬುದ್ಧಿ ತೆಗ್ಗ ತಗದ ಮುಚ್ಚಿ ಇಟ್ಟೇವಿ ಅಂದಂಗ. ಉದಾಹರಣೆಗೆ ಒಂದ ಸಣ್ಣ ಕಥೆ ಹೇಳ್ತೇನಿ ಕೇಳ್ರಿ. ಇದೇನರ ಚಲೋ ಅನಸಿದ್ರ ಮುಂದ ಓದಬಹುದು.

“ಒಂದ ಗುರುಕುಲದಾಗ ವಿದ್ಯಾರ್ಥಿಗಳಿಗೆ ಗುರುಗಳು ಪಾಠ ಹೇಳಾಕತ್ತಿದ್ರು. ಆ ಗುರುಕುಲದಾಗ ಒಂದ ಬೆಕ್ಕನ್ನ ಸಾಕಿದ್ರು. ಆ ಬೆಕ್ಕು ಪಾಠಕ್ಕ ಕುಳಿತ ವಿದ್ಯಾರ್ಥಿಗಳಿಗೆ ಕಾಟ ಕೊಡಾಕತ್ತಿತ್ತು. ಆ ಕಾರಣಕ್ಕ ಗುರುಗಳು ಪಾಠ ಮುಗಿಯೋವರೆಗೆ ಬೆಕ್ಕನ್ನ ಬುಟ್ಟಿ ಹಾಕಿ ಮುಚ್ಚಿ, ಪಾಠ ಮುಗಿದ ಮ್ಯಾಲೆ ಮತ್ತೆ ಬೆಕ್ಕಿನ ಹೊರಗ ಬಿಡಾಕ ಹೇಳಿದ್ರು. ದಿನ ಇದ ಪದ್ಧತಿ ಮುಂದವರಿತ.

ಸಮಯ ಕಳೀತು, ಗುರುಗಳು ತೀರಿ ಹೋದ್ರು, ಹಳೆ ವಿದ್ಯಾರ್ಥಿಗಳು ಮನೆಗೆ ಹೋದ್ರು, ಹೊಸ ಗುರುಗಳು ಬಂದ್ರು, ಹೊಸ ವಿದ್ಯಾರ್ಥಿಗಳು ಬಂದ್ರು, ಬೆಕ್ಕು ಸತ್ತೋಯ್ತು. ಈಗ ಇವರಿಗೆ ಮೊದಲಿದ್ದವರ ಪದ್ಧತಿ ಮುಂದುವರೆಸೋದಿತ್ತು. ಆ ಕಾರಣಕ್ಕ ಈಗಿನ ಶಿಸ್ಷ್ಯಂದಿರು ಹೋಗಿ ಒಂದು ಬೆಕ್ಕಿನ ಮರಿಯನ್ನ ತಂದ್ರು. ಅದನ ಬುಟ್ಟೀಲಿ ಹಾಕಿ ಮುಚ್ಚಿಟ್ಟು ಪಾಠ ಕೇಳೋದಕ್ಕೆ ಶುರು ಮಾಡಿದ್ರು. ಕಾರಣ ಕೇಳಿದ್ರ ಮೊದಲಿದ್ದ ಗುರುಗಳು ಮಾಡಿದ ಪದ್ಧತಿ ಅದನ ಪಾಲಿಸೋದು ನಮ್ಮ ಕರ್ತವ್ಯ ಅಂದ್ರು.”

ಈಗ ವಿಷಯಕ್ಕ ಬರೋನು, ಬೆಕ್ಕು ಕಾಟ ಕೊಟ್ಟಿದ್ದಕ್ಕ ಬುಟ್ಯಾಗ್ ಹಾಕಿದ್ದ, ಆ ಸಮಯ ಸಂದರ್ಭಕ್ಕ ತಗೊಂಡಿರೋ ವಾಸ್ತವಿಕ ನಿರ್ಧಾರ. ಅದಕ್ಕ ಅರ್ಥ ಅಯ್ತಿ, ಇದ ಪದ್ಧತಿ ಅಂತ ಇರ್ಲಾರ್ದ ಬೆಕ್ಕನ್ನ ತಗೊಂಡ್ ಬಂದ ಬುಟ್ಟ್ಯಾಗ ಹಾಕೋದು ಎಷ್ಟರ ಮಟ್ಟಿಗೆ ಸರಿ...!! ಹಿರ್ಯಾರು ಹೇಳಿದರು ಅಂತ ಪಾಲಸೋಕಿಂತ ಮುಂಚೆ ಯಾವ ಸಮಯದಾಗ, ಯಾವ ಸಂದರ್ಭದಾಗ ಅವರು ಇದನ್ನ ಯಾಕ ಹೇಳಿದರು ಅನ್ನೋದ ತಿಳ್ಕೊಂಡು ಮುಂದ ಇದನ್ನ ಅನುಸರಿಸೋದೋ ಅಥವಾ ಬಿಡೋದೋ ನಿರ್ಧಾರ ಮಾಡ್ಬೇಕಾಗಿದ್ದ ನಮ್ಮ ನಿಮ್ಮಂತ ಬುದ್ಧಿವಂತರ ಕೆಲಸ. ಒಂದಿಷ್ಟು ಹೇಳಿಕೆಗಳನ್ನ ಕೆಳಗಡೆ ಬರ್ದಿದಿನಿ, ನನಗ ಅರ್ಥ ಆದಷ್ಟು ಮಟ್ಟಿಗೆ ವಿವರಣೆ ಕೊಟ್ಟೇನಿ. ನೀವು ಓದಿದ ಮ್ಯಾಲೆ ನಿಮಗೇನಾದರೂ ಬೇರೆ ಗೊತ್ತಿದ್ರ ಕಾಮೆಂಟ್ ಮಾಡಿ ಹೇಳ್ರಿ.

೧) ಬಹಳ ಪ್ರಸಿದ್ಧವಾಗಿದ್ದ ಹೇಳಿಕೆ ಅಂದ್ರ, ಬೆಕ್ಕು ಅಡ್ಡ ಹೋದ್ರ ಸ್ವಲ್ಪ ಹೊತ್ತು ನಿಂತ ಆಮೇಲೆ ಹೋಗ್ಬೇಕ. ಇದನ್ನ ಯಾವ ಸಂದರ್ಭದಾಗ ಹೇಳಿದ್ರು, ಯಾಕ ಹೇಳಿದ್ರು ಅಂತ ವಿಶ್ಲೇಷಣೆ ಮಾಡಿದಾಗ, ತಿಳ್ಕೊಬೇಕಾಗಿದ್ದು ಏನ್ ಅಂದ್ರ, ಮೊದ್ಲು ಜನ ಕುದರೆ ಮೇಲೆ, ಎತ್ತಿನ ಬಂಡಿಯಲ್ಲಿ, ಪ್ರಯಾಣ ಮಾಡತಿದ್ರು. ದಾರಿ ಕಾಡು, ಗುಡ್ಡ ಬೆಟ್ಟಗಳ ನಡುವ ಇರ್ತಿತ್ತು. ಕೆಲವೊಮ್ಮೆ ಕತ್ತಲಾದಾಗ ದೊಂದಿ ಇಟ್ಕೊಂಡ್ ಹೋಗ್ತಿದ್ರು. ಕಾಡು ಪ್ರಾಣಿಗಳು, ಕಾಡು ಬೆಕ್ಕು ದಾರಿಗೆ ಅಡ್ಡ ಬಂದಾಗ ಅವುಗಳ ಹೊಳಿಯುವ ಕಣ್ಣ ನೋಡಿ, ಕುದರಿ, ದನಗೋಳ ಬೆದರಿ ಅಡ್ಡ-ತಿಡ್ಡಿ ಹೋಗ್ತಾವ್ ಅಂತ ಸ್ವಲ್ಪ ಹೊತ್ತು ನಿಂತ ಕುದರೆ/ಎತ್ತು ಸಮಾಧಾನ ಅದ್ಮ್ಯಾಲೆ ಮತ್ತ ಪ್ರಯಾಣ ಮುಂದ ವರಸತಿದ್ರು. ಕೆಲವಂದಿಷ್ಟು ಜನ ಕಲ್ಲು ಒಗದ ಪ್ರಾಣಿ ಹೋಯ್ತಿಲ್ಲೋ ಅಂತ ಗೊತ್ತಮಾಡಿಕೊಂಡ ಮುಂದ ಹೋಗ್ತಿದ್ರು. ಈಗ ಬೆಕ್ಕ ಹಗಲೊತ್ತ ಅಡ್ಡ ಹೋದ್ರ ಕಲ್ಲಒಗದ  ಮುಂದ ಹೋಗ್ತಾರ. ಯಾಕ ಅಂತ ಅವರಿಗೂ ಗೊತ್ತಿಲ್ಲ. ಹಿರ್ಯಾರ್ ಹೇಳ್ಯಾರಿ ಮಾಡ್ಬೇಕ.

೨) ಸಂಜೆ ಹೊತ್ತು ಕಸ ಹೊರಗ ಹಾಕ್ಬಾರ್ದು, ಲಕ್ಷ್ಮಿ ಹೊರಗ ಹೋಗ್ತಾಳ. ಇದನ್ನ ಹಿರಿಯರು ಹೇಳಿದಾಗ, ಥಾಮಸ್ ಎಡಿಸನ್ ಬಲ್ಬ್ ಕಂಡ ಹಿಡದಿರ್ಲಿಲ್ಲ, ಚಿಮಣಿ ಬುಡ್ಡಿ ಬೆಳಕಾದಾಗ ರಾತ್ರಿ ಕಸದ ಜೊತಿ ಏನಾದ್ರು ತುಟ್ಟಿ ಸಾಮಾನ ಹೊರಗ ಹೋಗ್ತೇತಿ ಅನ್ನೋ ಕಾರಣಕ್ಕ ಹಂಗ ಹೇಳಿದಾರ. ಈಗ LED ಬಲ್ಬ್ ಹಾಕಿನು ಮನ್ಯಾಗ ಕಸ ಇಟ್ಕೊಂಡ್ ಮಲಗೋದು ಎಷ್ಟರ ಮಟ್ಟಿಗೆ ಸರಿ!

೩) ಹೊತ್ತ ಮುಣಗಿದ ಮ್ಯಾಲೆ ಉಗುರು ತಗಿಬಾರ್ದು, ಯಾಕಂದ್ರ ಮದ್ಲ ಕರೆಂಟ್ ಇರ್ಲಿಲ್ಲ, ಬ್ಲೇಡ್ ಅಥವಾ ಯಾವದರ ಹರಿತವಾದ ವಸ್ತು ಇಂದ ಕತ್ಲದಾಗ ಕೈ ಗೆ ನೋವು ಮಾಡ್ಕೊಬಾರದಂತ ಹಿರಿಯರು ಇದನ್ನ ಹೇಳಿದ್ರು. ಆದ್ರ ಈಗ್ಲೂ ಎಷ್ಟೊಂದ್ ಜನ ಉಗರ ತಕ್ಕೊಳಾಕ ಟೈಮ್ ಸಿಗಲಾರ್ದ ಅಡ್ಯಾಡತಾರ್ ಪಾಪ.


೪) ರಾತ್ರಿ ಊಟ ಆದ್ಮ್ಯಾಲೆ ಭಾಂಡೆ ಎಲ್ಲ ತೊಳೆದಿಟ್ಟು ಮಲಗಬಾರದು ಅಂತ ಹೇಳ್ತಾರ್. ಇದ್ಯಾಕ ಅಂತ ಯೋಚನೆ ಮಾಡಾಕಾತ್ರಿ, ಹೇಳ್ತೇನಿ ಕೇಳ್ರಿ, ಮೊದ್ಲು ಮಂದಿ ನೆಂಟರ ಮನಿಗೆ, ಸಂಬಂಧಿಕರ ಮನಿಗೆ ನಡ್ಕೊಂಡೋ, ಅಥವಾ ಎತ್ತಿನ ಬಂಡಿ ಇಲ್ಲ ಕುದರೆ ಮ್ಯಾಲೆ ಹೋಗ್ತಿದ್ರು. ರಾತ್ರಿ ಆದ ತಕ್ಷಣ ಯಾವ ಊರು ತಲುಪತಿದ್ರೋ ಅಲ್ಲಿ ತಮ್ಮ ಜಾತಿ ಮಂದಿ ಮನ್ಯಾಗ ಉಳ್ಕೊತಿದ್ರು. ಅದಕ್ಕಾಗಿ ಹೇಳಿ ಕೇಳಿ ಬರಲಾರದ ಅತಿಥಿ ಉಪವಾಸ ಮಲಗಬಾರದು ಅಂತ ಒಬ್ಬರ ಪಾಲಿನ ಅಡಿಗಿ ಜಾಸ್ತಿ ಮಾಡಿ ಇಡ್ತಿದ್ರು. ಈಗ ಆದ್ಯಾಕ ಹಂಗ ಮಾಡ್ತಿದ್ರು ಅನ್ನೋ ಕರಣಾನು ಗೊತ್ತಿರಲಾರದ, ಕುಕ್ಕರದಾಗ ಸ್ವಲ್ಪ ಅನ್ನಉಳಸಿ ಅದನ್ನ ಮುಂಜಾನೆ ಚೆಲ್ಲಿ ಕುಕ್ಕರ ತೊಳೀತಾರ. ಇದ ನೆಪಾದಾಗ ರಾತ್ರಿ ಉಂಡಿದ್ದ ಭಾಂಡೆ ನು ತೊಳಿಲಾರ್ದ ಜೊಂಡಿಗ್ಯಾ ಸಾಕ್ತಾರ್ ಮನ್ಯಾಗ.

೫) ಹೊಸ್ತಿಲ ಮ್ಯಾಲೆ ನಿತ್ಕೊಂಡ್ ಸೀನಬಾರ್ದು ಅಂತಾರ. ಯಾಕಂದ್ರ ಮೊದಲಿನ ಮನಿ ಬಾಗ್ಲ ಸಣ್ಣು ಇರ್ತಿದ್ದು. ಸೀನೋವಾಗ ಹೊಸ್ತಿಲಿಗೆ ತಲಿ ಬಡದ್ ನೋವಾಗಬಾರ್ದ ಅಂತ ಹಂಗ ಹೇಳ್ತಿದ್ರು.

ಹಾಗಂತ ಮೊದಲು ಮಾಡಿದ ಪದ್ಧತಿಗಳಿಗೆ ಅರ್ಥ ಇಲ್ಲ ಅಂತ ನಾನು ಹೇಳಂಗಿಲ್ಲ. ಪ್ರತಿಯೊಂದಕ್ಕೂ ಅರ್ಥ ಐತಿ. ಆದರ ಸಮಯ ಕೂಡ ಅಷ್ಟ ಮುಖ್ಯ ಐತಿ. ಮೇಲೆ ಹೇಳಿದ್ದು ಕೆಲವು ಅಷ್ಟೇ ಉದಾಹರಣೆಗಳು, ಹುಡುಕ್ಕೊಂತ ಹೋದ್ರ ಇನ್ನೂ ಭಾಳ ಅದಾವ.

ಹಕ್ಕು ನಿರಾಕರಣೆ: ಎಲ್ಲಾ ಚಿತ್ರಗಳನ್ನು ವೆಬ್‌ನಿಂದ ಪಡೆಯಲಾಗಿದೆ. ಬ್ಲಾಗ್ ಮಾಲೀಕರು / ಲೇಖಕರು ಈ ಚಿತ್ರಗಳ ಹಕ್ಕು ಸಾಧಿಸುವುದಿಲ್ಲ.

.........

Monday, March 13, 2023

ಪಾನೀಯ ಮಾಡಿದ ಪಜೀತಿ!

 ಶಿವ - ಶಿವಾ...! ಈ ಲೇಖನ ಎಲ್ಲ ಬರಿಯೋದು ನನ್ನ ಹವ್ಯಾಸನೇ ಅಲ್ಲ... ಓದೋ ಹವ್ಯಾಸ ಏನೊ ಐತಿ. ಬರೆಯೋದು ಅಂದ್ರೆ ಮೈಯಲ್ಲ ಮುಳ್ಳು. ಆದ್ರೂ ಸಿದ್ದಿ ಕಾಟಕ್ಕೆ ಬರೀತೀನಿ. ನಾನು ಎಸ್ಟ್ ಆಲಸಿ ಅದೇನಿ ಅಂದ್ರ, ಸಿದ್ದಿ ಇರ್ಲಿಲ್ಲ ಅಂದ್ರ ಊಟ ಮಾಡಕೂ ಬೇಜಾರ್ ಮಾಡ್ಕೋತೀನಿ. ಹಂತಾದ್ರಾಗ ೧೫ ದಿನ ಸಿದ್ದಿ ಹಿಂದೆ ಬಿದ್ದ ಮ್ಯಾಲೆ ಈ ಲೇಖನ ಬರ್ಯಾಕತೇನಿ .

ದಿನಾಂಕ್ ೨೪.೦೨.೨೦೨೩
ನನಗೆ ಮತ್ತೆ ಸಿದ್ದಿಗೆ ನನ್ನ ಒಬ್ಬ ಗೆಳತಿಯ ಮಗನ ಹುಟ್ಟುಹಬ್ಬದ ಆಚರಣೆಗೆ ಆಮಂತ್ರಣ ಬಂದಿತ್ತು. ನಮ್ಮ ಜೊತಿ ನನ್ನ ಮತ್ತಿಬ್ಬರು ಗೆಳತಿಯರು ಇದ್ದರು. ಒಟ್ಟು ನಾಲ್ಕು ಜನ ಹೋಗೋದು ಅಂತ ಪ್ಲಾನ್ ಆಗಿತ್ತು. ನಮ್ಮ ಆಫೀಸ್ ಕೆಲಸ ಮುಗಿಯುತ್ತಿದ್ದಂತೆ ಸಿದ್ದಿ ನಮ್ಮನ್ನ ಆಫೀಸ್ ಇಂದ ಪಿಕ್ ಅಪ್ ಮಾಡಿದ್ರು. ಸರಿ ನಮ್ಮ ಸವಾರಿ ಗೂಗಲ್ ಮ್ಯಾಪ್ ತೋರಿಸಿದ್ದ ಕಡೆ ಹೊಂಟಿತು. ದಾರಿಯಲ್ಲೇ ಉಡುಗೊರೆ ಖರೀದಿ ಕೂಡ ಆಯಿತು.


ಲೊಕೇಶನ್ ನೋಡ್ತಾ ನಮ್ಮ ಕಾರು ನಿರ್ಜನ ಜಾಗಕ್ಕೆ ಬಂತು. ಇದೆಂತ ಜಾಗಾದಾಗ ಇಕಿ ಹುಟ್ಟುಹಬ್ಬ ಮಾಡಾಕತಾಳೋ ಮಾರಾಯ...! ಅಂದುಕೊಂಡ್ವಿ. ಆಮೇಲೆ ಮುಂದೆ ಹೋದಂಗ ಲೈಟ್ಸ್ ಕಾಣಾಕ ಶುರುವಾದವು. ನನ್ನ ಒಬ್ಬ ಗೆಳತಿ ಪರಿಮಳ ಖುಷಿ ಇಂದ ಅಲ್ಲೇ ಇರ್ಬೆಕ್ ನಡೀರಿ ಅಂದ್ಲು. ಅಲ್ಲಿ ನೋಡಿದ್ರ ರೋಡ್ ರೋಲರ್ ಕೆಲಸ ಮಾಡತಿದ್ವು. ನಾವಂದ್ವಿ ಅಕಿಗೆ ನಿನ್ನ ಇಲ್ಲೇ ಇಳಸ್ತೇವಿ ನಿನ್ ಪಾರ್ಟಿ ಮುಗಸ್ಕೊಂಡ್ ಬಾ ಅಂತ. ಅಸ್ಟೊತ್ತಿಗೆ ಅಲ್ಲೇ ಒಂದ್ ಸಣ್ಣ ಬ್ಯಾನರ್ ಕಾಣಸ್ತು, ಅದರಲ್ಲಿ ಹುಟ್ಟುಹಬ್ಬದ ಶುಭಾಶಯದೊಂದಿಗೆ ದಾರಿನೂ ತೋರಸಿತ್ತು. 

ಅಂತೂ-ಇಂತೂ ಲೊಕೇಶನ್ ಸಿಕ್ತು. ಆದ್ರ ಜಾಗ ಮಾತ್ರ ಸುಪರೋ-ಸೂಪರ್! ಓಪನ್ ಗಾರ್ಡನ್, ತಣ್ಣನ ಗಾಳಿ. ಹೋಗಿ ಗೆಳತಿಗೆ ಮುಖ ತೋರಸಿ, ಹೈ ಹೇಳಿ ಒಂದ್ ಟೇಬಲ್ ಹಿಡದು ಕೂತ್ಕೊಂಡ್ವಿ. ಈ ಲೇಖನ ಬರೆಯೋಕೆ ಮುಖ್ಯ ಕಾರಣ ಮತ್ತು ಲೇಖನದ ಹಾರ್ಟ್, ಹೃದಯ, ದಿಲ್ ಅಂತಾರಲ್ಲ ಈಗ ಶುರುವಾಯ್ತು ನೋಡ್ರಿ...

"ಹುಟ್ಟುಹಬ್ಬಕ್ಕೆ ಬಂದ ಫ್ಯಾಮಿಲಿಗಳು ಅಲ್ಲಿಲ್ಲಿ ನಿಂತುಕೊಂಡು, ಕುಳಿತುಕೊಂಡು ಮಾತನಾಡುತ್ತಿದ್ದರು. ಎಷ್ಟೋ ಜನ ಹೆಂಡತಿಯರು ಮಕ್ಕಳನ್ನು ಗಂಡನ ಕೈಗೆ ಕೊಟ್ಟು ಸೆಲ್ಫಿ ತಗೋಳೋದರಲ್ಲಿ ತೊಡಗಿಸಿಕೊಂಡಿದ್ರು . ಬಂದ ಜನಕ್ಕೆಲ್ಲ ವೆಲ್ಕಮ್ ಡ್ರಿಂಕ್ ಸರ್ವ್ ಮಾಡುತ್ತಿದ್ದ ಸರ್ವರ್ ಗಳನ್ನ ನೋಡಿ ನಾವು ಖುಷಿ ಇಂದ ವೆಲ್ಕಮ್ ಡ್ರಿಂಕ್ ತಗೊಂಡ್ವಿ. ಹಳದಿ ಬಣ್ಣದ ಪಾನೀಯ. ನಾನು ಇನ್ನೇನು ಎತ್ತಿ ಕುಡಿಬೇಕು ಅಂತ ಬಾಯಿ ಹತ್ರ ಒಯ್ದೆ, ಏನೊ ವಾಸನೆ. ನಾನು ಕುಡೀಲಾರದೆ ನನ್ನ ಗೆಳತಿಯರಿಗೆ ಮತ್ತು ಸಿದ್ದಿಗೆ ಕುಡಿದು ಹೆಂಗೈಯ್ತಿ ಅಂತ ಹೇಳ್ರಿ ಅಂದೆ. ಗೆಳತಿಯರ ಮುಖಗಳು ಪಾನೀಯ ಕುಡಿದ ಮೇಲೆ ವಿಕಾರವಾದವು. ಅದೆಂತ ರೆಸಿಪಿ ಇದ ಕೇಳ್ಬೇಕಿತ್ ನೋಡ್ ಅಂತ ಭಾಗ್ಯ ಅಂದಳು. ಕುಡೀಲಾರದ ಅದನ್ನ ಸುಮ್ಮನೆ ಬಿಟ್ವಿ

 ಒಂದು ನಲವತ್ತೈದು ನಿಮಿಷ ಆಗಿರ್ಬೇಕ್ ಮತ್ತ ಸರ್ವರ್ ಪಾನೀಯ ತಂದ. ಈ ಸಲ ಕೆಂಪಗಾ ಇತ್ತು. ಆದ್ರ ನಾನ್ ಹೆದ್ರಿ ನಂಗ ಬ್ಯಾಡಪ್ಪ ಅಂದೆ. ಭಾಗ್ಯ ಇದನ್ನು ನೋಡೇ ಬಿಡನ ಅಂತ ಒಂದ್ ಗ್ಲಾಸ್ ತಗೊಂಡ್ಲು. ಮತ್ತ ಅದ ಟೇಸ್ಟ್, ಬರೀ ಬಣ್ಣ ಬದಲಿ ಆಗಿತ್ತ. ನನ್ನೆದುರು ಒಬ್ಬ ಗಂಡ (ಮುಖ ನೋಡಿದ್ರ ಗೊತ್ತಾಗ್ತಿತ್ ಮದ್ವಿ ಆಗೇತಿ ಅಂತ) ಸರ್ವರ್ ನ ಕರದು ಪಾನೀಯ ತಗೊಂಡ. ನಾನು ಹೆಂಗ್ ಕುಡಿತಾನಪ ಇಂವ ಅಂತ ಭಾಳ ಲಕ್ಷ ಕೊಟ್ಟ ನೋಡಾಕತ್ತಿದ್ದೆ. ನನ್ನ ಗೆಳತಿಯರಿಗೆ ಮತ್ತ ಸಿದ್ಧಿಗೂ ನೋಡಾಕ್ ಹೇಳ್ದೆ. ಒಂದ್ ಗುಟುಕು ಕುಡದ ಅದ ವಿಕಾರ ಮುಖ ಮಾಡಿ ಅಂವ ಅಬ್ಬಾ ಏನೋಪಾ ಇದ...! ಕೆಟ್ಟದಾಗೈತಿ ಅಂದ. ನಮಗೋ ನಗು ತಡ್ಯಾಕ ಅಗ್ವಾಲ್ತ್ . ಅವನ ಮುಂದ ಒಂದ್ ೮ ಹೆಜ್ಜಿ ಇಟ್ರಾ ಕಸದ ಬುಟ್ಟಿ ಇತ್ತ. ಅಲ್ಲಿ ಹಾಕಾಕ್ ಎರಡು ಹೆಜ್ಜಿ ಬಂದ್ ನಿಂತ್ಕೊಂಡ. ನಾನ್ ಏನಾತಪ ಇವಂಗ ಅನ್ಕೊಂಡೆ. ವಾಪಸ್ ಹೋಗಿ ದೂರ ಕುಂತಿದ್ದ ತನ್ನ ಹೆಂಡತಿಗೆ ಕೊಟ್ಟ. ಅಕಿ ಖುಷಿ ಲೇ ಕುಡದ ಬಿಟ್ಲ. ನಾನು ಅನ್ಕೊಂಡೆ ಬಪ್ಪರೇ ಬಹದ್ದೂರ ಗಂಡ! ಅಂತ. ನನ್ನ ಫ್ರೆಂಡ್ ಗೆ ಅಂದೆ ಬಾಲೆ ಹೋಗಿ ಅಕಿಗೆ ಹೇಳೋಣಾಂತ. ಮತ್ತ ಬ್ಯಾಡ ಬಿಡ್ ಅವನೌನ ನಾವ್ಯಾಕೆ ಜಗಳ ಹಚ್ಚುದ ಅಂತ ಬಿಟ್ವಿ. ಆದ್ರ ನೆನಸ್ಕೊಂಡ್ ಕಣ್ಣಾಗ ನೀರ್ ಬರೂಹಂಗ ನಕ್ಕೆವಿ. ಅಂತಾದ ಏನ್ ಸಿಟ್ಟಿತ್ತೋ ಆ ಪುಣ್ಯಾತ್ಮಗ ಅಕಿ ಮ್ಯಾಲೆ ಅಂತ!!
.........

Thursday, April 16, 2020

ನಮ್ ಯಜಮಾನರಂದ್ರೆ ಸುಮ್ನೆ ಅಲ್ಲ!!

ಪ್ರತಿದಿನ ಮಲಗುವ ಮುನ್ನ ಕನಿಷ್ಠ ಎರಡು ಪುಟ ಓದಿ ಮಲಗುವದು ನನ್ನ ಅಭ್ಯಾಸ. ನಿನ್ನೆ ರಾತ್ರಿಯೂ ಕೂಡ ಹಾಗೆ, "ವಿಜಯ ಕರ್ನಾಟಕ ದೀಪಾವಳಿ ವಿಶೇಷಾಂಕ ೨೦೦೦" ಮ್ಯಾಗಝಿನ್ನಲ್ಲಿ ಓದುಗರ ಪುಟಗಳನ್ನು ಓದುತ್ತಿದ್ದೆ. ಆಗ ಈ ಕೆಳಗಿನ ಲೇಖನ ನನ್ನ ಗಮನ ಸೆಳೆಯಿತು. ಓದುತ್ತ ರಾತ್ರಿ ಸುಮಾರು ೧೦ ಗಂಟೆಗೆ ಜೋರಾಗಿ ನಗಲು ಶುರು ಮಾಡಿದೆ. ಸಿದ್ದ ಏನದು ನನಗೂ ಹೇಳು ಎಂದರು. ಅವರಿಗೆ ಹೇಳಲು ಹೋದರೆ ಇನ್ನು ನಗು. ತಡೆದುಕೊಳ್ಳಲು ಆಗುತ್ತಿಲ್ಲ. ಕಣ್ಣಲ್ಲಿ ಧಾರಾಕಾರ ನೀರು ಸುರಿಯೋವರೆಗೂ ನಕ್ಕಿದ್ದೆ- ನಕ್ಕಿದ್ದು.

click image to enlarge
ಈ ಲೇಖನ ಓದಿದ ನಂತರ ನನಗನಿಸಿದ್ದು "ನಾವು ಯಾರಿಗೂ ಕಮ್ಮಿ ಇಲ್ಲ, ನಮ್ಮ್ ಯಜಮಾರಂದ್ರೆ ಸುಮ್ನೆ ಅಲ್ಲ" ಅಂತ. ಏಕೆ ಅಂತೀರಾ? ಇಲ್ಲಿದೆ ನೋಡಿ ಕಾರಣ -
ನಾವು ಹೈದರಾಬಾದಲ್ಲಿದ್ದಾಗ ಇಬ್ಬರು ಕೆಲಸಕ್ಕೆ ಹೋಗುತ್ತಿದ್ದೆವು. ಸಿದ್ದನ ಶಿಫ್ಟ್ ರಾತ್ರಿ ೧೧ ಗಂಟೆಗೆ ಮುಗಿದರೆ, ನಂದು ರಾತ್ರಿ ೧೨.೩೦ಕ್ಕೆ ಮುಗಿಯುತ್ತಿತ್ತು. ಚಳಿಗಾಲದಲ್ಲಿ ಮೈ ಕೊರೆವ ಚಳಿ ಬೇರೆ. ಒಂದಿನ ಆಫೀಸ್ ಮುಗಿಸಿ ನಾನು ಮನೆಗೆ ಬರೊ ಹೊತ್ತಿಗಾಗೆಲೇ ಸಿದ್ದ ಮನೆಗೆ ಬಂದು ಕಿಚನ್ ನಲ್ಲಿ ಏನೋ ಕೆಲಸ ನಡೆಸಿದ್ದರು. ನನಗೆ "ಬೇಗ ಫ್ರೆಶ್ ಆಗಿ ಬಾ ಬಿಸಿ ಬಿಸಿ ಸೂಪ್ ಮಾಡಿದ್ದೇನೆ ಕುಡಿಯೋಣ ಎಂದರು. ಆಯಿತು ಅಂತ ಫ್ರೆಶ್ ಆಗಿ ಸೂಪ್ ಕುಡಿಯಲು ಕುಳಿತೆವು, ಸೂಪ್ ಒಂದು ಚಮಚ ಬಾಯಲ್ಲಿ ಹೋದ ನಂತರ ಇಬ್ಬರಿಗೂ ಖಾರ ಹತ್ತಿತು. ನಾನು ಕೇಳಿದೆ ಯಾವ ಸೂಪಿದು ಅಂತ. ಯಾವದೋ ಒಂದು ಅವರಿಗೂ ಗೊತ್ತಿಲ್ಲ. ಸರಿ ಇಬ್ಬರೂ ಹು-ಹಾ ಎಂದು ಕರಾಟೆ ಆಡುತ್ತಲೇ ಸೂಪ್ ಕುಡಿದು ಮುಗಿಸಿದೆವು. ಪಾತ್ರೆ ತೊಳೆದು ಮಲಗಿದೆವು. ಬೆಳಿಗ್ಗೆ ಎದ್ದು ಕಸದ ಡಬ್ಬಿಯಲ್ಲಿ ಕಸ ಹಾಕಲಿಕ್ಕೆ ಹೋದಾಗ, ರಾತ್ರಿ ಸಿದ್ದ ಸೂಪ್ ಮಾಡಿದ ಪ್ಯಾಕೆಟ್ ಅಲ್ಲಿತ್ತು. ಅದನ್ನು ಎತ್ತಿಕೊಂಡು ನೋಡಿದೆ ಅದು ಮಂಚೂರಿಯನ್ ಮಸಾಲಾ ಪ್ಯಾಕೆಟ್...! ಆಮೇಲೆ ಸಿದ್ಧನಿಗೆ ಹೇಳಿದೆ ಸೂಪ್ ಅಂತ ಹೇಳಿ ಮಸಾಲಾ ಕುಡಸಿದ್ದ ಮಹಾನುಭಾವರು ಜೋರಾಗಿ ನಗಲು ಶುರುಮಾಡಿದರು.

ಕೆಲವೊಂದು ಸಲ ಈ ರೀತಿ ತಪ್ಪುಗಳಾಗುತ್ತವೆ ಅನ್ಕೊಂಡಿರ? ನೋ ವೆ, ಚಾನ್ಸೇ ಇಲ್ಲ. ನಮ್ಮ ಸಿದ್ದನ ಕೈಲಿ ಕೆಲವೊಂದು ಸಲ ಅಲ್ಲ ಪ್ರತಿ ಸಲ ಈ ರೀತಿ ತಪ್ಪು ಆಗ್ತಾನೆ ಇರ್ತವೆ. ಹೇಗಂತೀರಾ ? ಮುಂದೆ ಓದಿ ನಿಮಗೆ ಅರ್ಥ ಆಗುತ್ತೆ -
ನಾನು ವೆಜ್-ಒಮ್ಲೆಟ್ ಅಂತ ಒಂದು ಡಿಶ್ ಮಾಡಿ ಕೊಡ್ತಿದ್ದೆ ಸಿದ್ಧನಿಗೆ. ಕಡ್ಲೆ ಹಿಟ್ಟನ್ನು ದೋಸೆ ಹಿಟ್ಟಿನ ಹದಕ್ಕೆ ಕಲಿಸಿ, ಅದಕ್ಕೆ ಜೀರಿಗೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಕರಿಬೇವು, ಕೊತಂಬರಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ದೋಸೆ ತರ ಹುಯ್ದು, ಸ್ವಲ್ಪ ಎಣ್ಣೆ ಹಾಕಿ ಮೇಲೆ ಕರಿ ಮೆಣಸಿನ ಪುಡಿ ಉದುರಿಸಿ ಕೊಡುತ್ತಿದ್ದೆ. ಸಿದ್ಧನಿಗೆ ತುಂಬಾ ಇಷ್ಟವಾಗಿತ್ತು. ಒಂದಷ್ಟು ದಿನದ ಮಟ್ಟಿಗೆ ನನ್ನ ಪರೀಕ್ಷೆಗೆಂದು ಧಾರವಾಡಕ್ಕೆ ಹೊರಟೆ. ಸಿದ್ಧನಿಗೆ ಹೇಳಿದೆ, "ಅಲ್ಲೇ ಕೆಳಗಡೆ ಸ್ವಲ್ಪ ಕಡ್ಲೆ ಹಿಟ್ಟಿದೆ. ಯಾವಾಗಾದ್ರೂ ಬೇಕಿದ್ರೆ ವೆಜ್ ಒಮ್ಲೆಟ್ ಮಾಡ್ಕೊಳ್ಳಿ" ಅಂತ.  ನಾನು ಊರಿಗೆ ಹೋಗಿ ಎರಡು ದಿನಗಳಾದ ಮೇಲೆ, ಇವತ್ತು ವೆಜ್ ಒಮ್ಲೆಟ್ ಮಾಡ್ಕೋತೀನಿ ಅಂತ ಬೆಳಿಗ್ಗೆ ಮೆಸೇಜ ಕಳಸಿದ್ರು. ಸಂಜೆ ಕಾಲ್ ಮಾಡಿ ಕೇಳಿದೆ ವೆಜ್ ಒಮ್ಲೆಟ್ ಹೆಂಗಿತ್ತು ಅಂತ. ಆಗ ಸಿದ್ದ "ನೀನು ಮಾಡಿದ್ ತರ ಇರ್ಲಿಲ್ಲ, ಹಂಚಿನಿಂದ ಏಳಲೇ ಇಲ್ಲ. ತಿಂದ್ರೆ ತುಂಬಾ ವಗರಾಗಿತ್ತು" ಅಂದ್ರು. ಆಗ ನಂಗೆ ಡೌಟ್ ಬಂತು, ನಾನು ಕೇಳಿದೆ, "ಡಬ್ಬಿಲಿದ್ದ ಹಿಟ್ಟಲ್ಲಿ ಮಾಡಿದ್ರಿ ತಾನೇ" "ಇಲ್ಲ ಅದು ಕಡಿಮೆ ಇತ್ತು ಕೆಳಗಡೆ ಹಾಳೆಲಿದ್ದ ಹಿಟ್ಟನ್ನು ಸೇರಸ್ಕೊಂಡೆ" ಅಂದ್ರು. ನಾನ್ ಹೇಳಿದೆ "ಅದು ಮುಸುಕಿನ ಜೋಳದ ಹಿಟ್ಟು, ಅದನ್ಯಾಕೆ ಹಾಕೊಂಡ್ರಿ ಅಂತ." ಆ ಕಡೆಯಿಂದ ಮತ್ತೆ ಅದೇ ಸೂಪಿನ ಸಮಯದ ನಗು...

ಏನು ನಕ್ಕು ಸುಸ್ತಾಯ್ತಾ? ಕತೆ ಮುಗಿತು ಅನ್ಕೊಂಡ್ರಾ? ಸ್ವಲ್ಪ ಇರಿ. ಇನ್ನು ಮುಗಿದಿಲ್ಲ ಸಿದ್ದನ ಪಾಕಶಾಲೆಯ ಅದ್ಭುತ ಸಾಧನೆಗಳು- 
ತರಕಾರಿ ಉಪ್ಪಿಟ್ಟು, ನಮ್ಮ ಸಿದ್ದ ಉಪ್ಪಿಟ್ಟು ಮಾಡುವದಕ್ಕೂ ಮುಂಚೆ ತರಕಾರಿ ಉಪ್ಪಿಟ್ಟು ಎಂದೇ ಹೆಮ್ಮೆಯಿಂದ ಕರಿಸಿಕೊಳ್ಳುತ್ತಿತ್ತು. ಆದರೆ ನಮ್ಮ ಸಿದ್ದ ಉಪ್ಪಿಟ್ಟು ಮಾಡಲು ಶುರು ಮಾಡಿದ ನಂತರ, ತರಕಾರಿ ಉಪ್ಪಿಟ್ಟು ತನ್ನ ಹೆಸರನ್ನು ಬದಲಿಸಿಕೊಳ್ಳುವದೇ ಒಳ್ಳೆಯದು, ಇಲ್ಲದಿದ್ದರೆ ಅಲ್ಪ-ಸ್ವಲ್ಪ ಜನ ತನ್ನನ್ನು ಇಷ್ಟಪಡುವವರಿದ್ದಾರೋ ಅವರೂ ಕೂಡ ತನ್ನನ್ನು ದ್ವೇಷಿಸಬಹುದೆಂದು, ಅದು ತನ್ನ ಹೆಸರನ್ನು, ತರಕಾರಿ ಉಪ್ಪಿಟ್ಟಿನಿಂದ - ಬಟಾಟಿ, ಬೀನ್ಸ್, ಗಜ್ಜರಿ, ವಟಾಣಿ ಉಪ್ಪಿಟ್ಟು ಎಂದಿಟ್ಟುಕೊಂಡಿತು. ಹೆಸರು ಸ್ವಲ್ಪ ಉದ್ದವಾಯಿತಷ್ಟೆ, ಆದರೆ ಸಿದ್ಧನಿಂದ ಹೋಗುತ್ತಿದ್ದ ತನ್ನ ಶೀಲವನ್ನು ಕಾಪಾಡಿಕೊಂಡಿತು. ಕಾರಣ ಇಷ್ಟೇ ಸಿದ್ದ ತರಕಾರಿ ಉಪ್ಪಿಟ್ಟಿನ ಹೆಸರಲ್ಲಿ, ಉಪ್ಪಿಟ್ಟಿಗೆ ಬೆಂಡೆಕಾಯಿ ಹಾಕುತ್ತಿದ್ದರು. ಅವರ ಜೊತೆ ಕೆಲಸ ಮಾಡುತ್ತಿದ್ದ ಒಂದೇ ಒಂದು ಕಾರಣಕ್ಕೆ ಪಾಪ ಆ ಉಪ್ಪಿಟ್ಟು ತಿಂದ ಒಬ್ಬ ಸಹೋದ್ಯೋಗಿ, ಮುಂದೆಂದೂ ತರಕಾರಿ ಉಪ್ಪಿಟ್ಟನ್ನು ಮುಟ್ಟುವದೆ ಇಲ್ಲ ಅಂತ ಶಪಥ ಮಾಡಿಬಿಟ್ಟಳು...

ಹೇಳುತ್ತಾ ಹೋದರೆ ಇದು ಮುಗಿಯದ ಕಥೆ. ಬರೆದು ನನಗೆ ಸುಸ್ತಾಗಬಹುದು, ಓದಿ ನಿಮಗೆ ಸಾಕಾಗಬಹುದು ಆದರೆ ನಮ್ಮ ಸಿದ್ಧನಿಗೆ ಮಾಡಿ ಬೇಜಾರು ಕೂಡ ಆಗಲ್ಲ.....
.........

Saturday, November 1, 2014

Kannada Rajyotsavada Shubhashayagalu

ಕನ್ನಡ ರಾಜ್ಯೋತ್ಸವದ ಶುಭಾಶಯಗಳು
.........