ನನಗ ಗೊತ್ತಿದ್ದವರು, ಫ್ರೆಂಡ್ಸ್, ಕೊಲೀಗ್ಸ್ ಯಾರಾದ್ರೂ ಮನೆಗೆ ಬಂದು ಹೋದ್ರ, ನಂತರದಲ್ಲಿ ಸಿಕ್ಕಾಗ ಅಥವಾ ಅವರ ಜೊತೆ ಮಾತಾದಾಗ ಅವರು ಹೇಳೋದೊಂದ, ಸಿದ್ದಿ(ನನ್ನ ಗಂಡ) ಎಷ್ಟೊಂದು ಸೈಲೆಂಟ್ ಅದಾರ, ಎಷ್ಟು ಒಳ್ಳೆವರಿದಾರ ಮತ್ತ ನಿನ್ನ ಹೆಂಗ ತಡ್ಕೊಂತಾರ ಪಾಪ ಅಂತ. ನನಗ ಭಾಳ ಬೇಜಾರಾಗ್ತೇತಿ ಯಾಕ ಹಿಂಗ ಯೋಚನೆ ಮಾಡ್ತಾರ ಅಂತ, ನಾನೇನ ಭಾಳ ಚಲೊ ಅದೇನಿ ಅಂತ ಹೇಳಂಗಿಲ್ಲ, ಸ್ವಲ್ಪ ಉಡಾಳ ಅದೇನಿ ಆದರ ಅವರ ಯೋಚನೆ ಮಾಡೋ ಅಷ್ಟ ಸಿದ್ದಿನು ಏನ್ ಒಳ್ಳೆವರಲ್ಲ ಅಂತ ನನ್ನ ಅಭಿಪ್ರಾಯ.
ಒಂದ ಸಣ್ಣ ಇನ್ಸಿಡೆಂಟ್ ಶೇರ್ ಮಾಡಬಹುದು ನಾನ್ ಇದನ್ನ ಪ್ರೂವ್ ಮಾಡಾಕ.
ಒಂದಿನ ಊಟ ಆದ್ಮ್ಯಾಲೆ ಸಿದ್ದಿಗೆ ನಾನ, "ಒಂದು ವೇಳೆ ನಿನಗ ನನ್ನ ಹೆಸರಿಡೋ ಅವಕಾಶ ಸಿಕ್ಕಿದ್ರ ಏನ್ ಅಂತ ಇಡ್ತಿದ್ದಿ?" ಅಂತ ಕೇಳಿದೆ. ಅದಕ ಅವರು, ಹೆಸರ ಅಪ್ಪ ಅಮ್ಮ ಇಡ್ತಾರ ಅಂತ ಹೇಳಿದ್ರು. ಓಕೆ ಈಗ ನೀನ, ನನ್ನ ನಿನ್ನ ಮಗಳ ಅನ್ಕೋ ಅಂದೆ. ನನ್ನ ಮಗಳ ಆಗಿದ್ರ ಮಾರಿ ಬಂದ ಬಿಡ್ತಿದ್ದೆ ನಿನ್ನ ಅಂದ್ರು. ಮತ್ತ ನಾನ ಕೇಳಿದೆ ಹೆಸರ ಏನ್ ಇಡ್ತಿದ್ದಿ ಅಂತ. ಸ್ವಾಮಿಗಳು ಅಕ್ಷರ ಹೇಳ್ತಾರ್ ಅದರ ಮ್ಯಾಲೆ ಹೆಸರಿಡ್ತಿದ್ದೆ ಅಂದ್ರು. ಆಮೇಲೆ ನಾನಂದೆ ಸ್ವಾಮಿಗಳು "P" ಅಕ್ಷರ ಕೊಟ್ರು ಅನ್ಕೋ ಈಗ ಹೇಳು ಏನೀಡ್ತಿದ್ದಿ ಅಂತ ಅಂದೆ. ಅದಕ್ಕ ಅವರ ಉತ್ತರ - "ಪೀಡಾ." ಯಾಕಂದ್ರ ನಿನ್ ಪೀಡಾ ಅದಿ..!
ಹೋಗಿ ಮಲ್ಕೊಂಡೆ ಸುಮ್ನ...!
.........



