ಪ್ರತಿದಿನ ಮಲಗುವ ಮುನ್ನ ಕನಿಷ್ಠ ಎರಡು ಪುಟ ಓದಿ ಮಲಗುವದು ನನ್ನ ಅಭ್ಯಾಸ. ನಿನ್ನೆ ರಾತ್ರಿಯೂ ಕೂಡ ಹಾಗೆ, "ವಿಜಯ ಕರ್ನಾಟಕ ದೀಪಾವಳಿ ವಿಶೇಷಾಂಕ ೨೦೦೦" ಮ್ಯಾಗಝಿನ್ನಲ್ಲಿ ಓದುಗರ ಪುಟಗಳನ್ನು ಓದುತ್ತಿದ್ದೆ. ಆಗ ಈ ಕೆಳಗಿನ ಲೇಖನ ನನ್ನ ಗಮನ ಸೆಳೆಯಿತು. ಓದುತ್ತ ರಾತ್ರಿ ಸುಮಾರು ೧೦ ಗಂಟೆಗೆ ಜೋರಾಗಿ ನಗಲು ಶುರು ಮಾಡಿದೆ. ಸಿದ್ದ ಏನದು ನನಗೂ ಹೇಳು ಎಂದರು. ಅವರಿಗೆ ಹೇಳಲು ಹೋದರೆ ಇನ್ನು ನಗು. ತಡೆದುಕೊಳ್ಳಲು ಆಗುತ್ತಿಲ್ಲ. ಕಣ್ಣಲ್ಲಿ ಧಾರಾಕಾರ ನೀರು ಸುರಿಯೋವರೆಗೂ ನಕ್ಕಿದ್ದೆ- ನಕ್ಕಿದ್ದು.
click image to enlarge |
ಈ ಲೇಖನ ಓದಿದ ನಂತರ ನನಗನಿಸಿದ್ದು "ನಾವು ಯಾರಿಗೂ ಕಮ್ಮಿ ಇಲ್ಲ, ನಮ್ಮ್ ಯಜಮಾನರಂದ್ರೆ ಸುಮ್ನೆ ಅಲ್ಲ" ಅಂತ. ಏಕೆ ಅಂತೀರಾ? ಇಲ್ಲಿದೆ ನೋಡಿ ಕಾರಣ -
ನಾವು ಹೈದರಾಬಾದಲ್ಲಿದ್ದಾಗ ಇಬ್ಬರು ಕೆಲಸಕ್ಕೆ ಹೋಗುತ್ತಿದ್ದೆವು. ಸಿದ್ದನ ಶಿಫ್ಟ್ ರಾತ್ರಿ ೧೧ ಗಂಟೆಗೆ ಮುಗಿದರೆ, ನಂದು ರಾತ್ರಿ ೧೨.೩೦ಕ್ಕೆ ಮುಗಿಯುತ್ತಿತ್ತು. ಚಳಿಗಾಲದಲ್ಲಿ ಮೈ ಕೊರೆವ ಚಳಿ ಬೇರೆ. ಒಂದಿನ ಆಫೀಸ್ ಮುಗಿಸಿ ನಾನು ಮನೆಗೆ ಬರೊ ಹೊತ್ತಿಗಾಗೆಲೇ ಸಿದ್ದ ಮನೆಗೆ ಬಂದು ಕಿಚನ್ ನಲ್ಲಿ ಏನೋ ಕೆಲಸ ನಡೆಸಿದ್ದರು. ನನಗೆ "ಬೇಗ ಫ್ರೆಶ್ ಆಗಿ ಬಾ ಬಿಸಿ ಬಿಸಿ ಸೂಪ್ ಮಾಡಿದ್ದೇನೆ ಕುಡಿಯೋಣ ಎಂದರು. ಆಯಿತು ಅಂತ ಫ್ರೆಶ್ ಆಗಿ ಸೂಪ್ ಕುಡಿಯಲು ಕುಳಿತೆವು, ಸೂಪ್ ಒಂದು ಚಮಚ ಬಾಯಲ್ಲಿ ಹೋದ ನಂತರ ಇಬ್ಬರಿಗೂ ಖಾರ ಹತ್ತಿತು. ನಾನು ಕೇಳಿದೆ ಯಾವ ಸೂಪಿದು ಅಂತ. ಯಾವದೋ ಒಂದು ಅವರಿಗೂ ಗೊತ್ತಿಲ್ಲ. ಸರಿ ಇಬ್ಬರೂ ಹು-ಹಾ ಎಂದು ಕರಾಟೆ ಆಡುತ್ತಲೇ ಸೂಪ್ ಕುಡಿದು ಮುಗಿಸಿದೆವು. ಪಾತ್ರೆ ತೊಳೆದು ಮಲಗಿದೆವು. ಬೆಳಿಗ್ಗೆ ಎದ್ದು ಕಸದ ಡಬ್ಬಿಯಲ್ಲಿ ಕಸ ಹಾಕಲಿಕ್ಕೆ ಹೋದಾಗ, ರಾತ್ರಿ ಸಿದ್ದ ಸೂಪ್ ಮಾಡಿದ ಪ್ಯಾಕೆಟ್ ಅಲ್ಲಿತ್ತು. ಅದನ್ನು ಎತ್ತಿಕೊಂಡು ನೋಡಿದೆ ಅದು ಮಂಚೂರಿಯನ್ ಮಸಾಲಾ ಪ್ಯಾಕೆಟ್...! ಆಮೇಲೆ ಸಿದ್ಧನಿಗೆ ಹೇಳಿದೆ ಸೂಪ್ ಅಂತ ಹೇಳಿ ಮಸಾಲಾ ಕುಡಸಿದ್ದ ಮಹಾನುಭಾವರು ಜೋರಾಗಿ ನಗಲು ಶುರುಮಾಡಿದರು.
ಕೆಲವೊಂದು ಸಲ ಈ ರೀತಿ ತಪ್ಪುಗಳಾಗುತ್ತವೆ ಅನ್ಕೊಂಡಿರ? ನೋ ವೆ, ಚಾನ್ಸೇ ಇಲ್ಲ. ನಮ್ಮ ಸಿದ್ದನ ಕೈಲಿ ಕೆಲವೊಂದು ಸಲ ಅಲ್ಲ ಪ್ರತಿ ಸಲ ಈ ರೀತಿ ತಪ್ಪು ಆಗ್ತಾನೆ ಇರ್ತವೆ. ಹೇಗಂತೀರಾ ? ಮುಂದೆ ಓದಿ ನಿಮಗೆ ಅರ್ಥ ಆಗುತ್ತೆ -
ನಾನು ವೆಜ್-ಒಮ್ಲೆಟ್ ಅಂತ ಒಂದು ಡಿಶ್ ಮಾಡಿ ಕೊಡ್ತಿದ್ದೆ ಸಿದ್ಧನಿಗೆ. ಕಡ್ಲೆ ಹಿಟ್ಟನ್ನು ದೋಸೆ ಹಿಟ್ಟಿನ ಹದಕ್ಕೆ ಕಲಿಸಿ, ಅದಕ್ಕೆ ಜೀರಿಗೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಕರಿಬೇವು, ಕೊತಂಬರಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ದೋಸೆ ತರ ಹುಯ್ದು, ಸ್ವಲ್ಪ ಎಣ್ಣೆ ಹಾಕಿ ಮೇಲೆ ಕರಿ ಮೆಣಸಿನ ಪುಡಿ ಉದುರಿಸಿ ಕೊಡುತ್ತಿದ್ದೆ. ಸಿದ್ಧನಿಗೆ ತುಂಬಾ ಇಷ್ಟವಾಗಿತ್ತು. ಒಂದಷ್ಟು ದಿನದ ಮಟ್ಟಿಗೆ ನನ್ನ ಪರೀಕ್ಷೆಗೆಂದು ಧಾರವಾಡಕ್ಕೆ ಹೊರಟೆ. ಸಿದ್ಧನಿಗೆ ಹೇಳಿದೆ, "ಅಲ್ಲೇ ಕೆಳಗಡೆ ಸ್ವಲ್ಪ ಕಡ್ಲೆ ಹಿಟ್ಟಿದೆ. ಯಾವಾಗಾದ್ರೂ ಬೇಕಿದ್ರೆ ವೆಜ್ ಒಮ್ಲೆಟ್ ಮಾಡ್ಕೊಳ್ಳಿ" ಅಂತ. ನಾನು ಊರಿಗೆ ಹೋಗಿ ಎರಡು ದಿನಗಳಾದ ಮೇಲೆ, ಇವತ್ತು ವೆಜ್ ಒಮ್ಲೆಟ್ ಮಾಡ್ಕೋತೀನಿ ಅಂತ ಬೆಳಿಗ್ಗೆ ಮೆಸೇಜ ಕಳಸಿದ್ರು. ಸಂಜೆ ಕಾಲ್ ಮಾಡಿ ಕೇಳಿದೆ ವೆಜ್ ಒಮ್ಲೆಟ್ ಹೆಂಗಿತ್ತು ಅಂತ. ಆಗ ಸಿದ್ದ "ನೀನು ಮಾಡಿದ್ ತರ ಇರ್ಲಿಲ್ಲ, ಹಂಚಿನಿಂದ ಏಳಲೇ ಇಲ್ಲ. ತಿಂದ್ರೆ ತುಂಬಾ ವಗರಾಗಿತ್ತು" ಅಂದ್ರು. ಆಗ ನಂಗೆ ಡೌಟ್ ಬಂತು, ನಾನು ಕೇಳಿದೆ, "ಡಬ್ಬಿಲಿದ್ದ ಹಿಟ್ಟಲ್ಲಿ ಮಾಡಿದ್ರಿ ತಾನೇ" "ಇಲ್ಲ ಅದು ಕಡಿಮೆ ಇತ್ತು ಕೆಳಗಡೆ ಹಾಳೆಲಿದ್ದ ಹಿಟ್ಟನ್ನು ಸೇರಸ್ಕೊಂಡೆ" ಅಂದ್ರು. ನಾನ್ ಹೇಳಿದೆ "ಅದು ಮುಸುಕಿನ ಜೋಳದ ಹಿಟ್ಟು, ಅದನ್ಯಾಕೆ ಹಾಕೊಂಡ್ರಿ ಅಂತ." ಆ ಕಡೆಯಿಂದ ಮತ್ತೆ ಅದೇ ಸೂಪಿನ ಸಮಯದ ನಗು...
ಏನು ನಕ್ಕು ಸುಸ್ತಾಯ್ತಾ? ಕತೆ ಮುಗಿತು ಅನ್ಕೊಂಡ್ರಾ? ಸ್ವಲ್ಪ ಇರಿ. ಇನ್ನು ಮುಗಿದಿಲ್ಲ ಸಿದ್ದನ ಪಾಕಶಾಲೆಯ ಅದ್ಭುತ ಸಾಧನೆಗಳು-
ತರಕಾರಿ ಉಪ್ಪಿಟ್ಟು, ನಮ್ಮ ಸಿದ್ದ ಉಪ್ಪಿಟ್ಟು ಮಾಡುವದಕ್ಕೂ ಮುಂಚೆ ತರಕಾರಿ ಉಪ್ಪಿಟ್ಟು ಎಂದೇ ಹೆಮ್ಮೆಯಿಂದ ಕರಿಸಿಕೊಳ್ಳುತ್ತಿತ್ತು. ಆದರೆ ನಮ್ಮ ಸಿದ್ದ ಉಪ್ಪಿಟ್ಟು ಮಾಡಲು ಶುರು ಮಾಡಿದ ನಂತರ, ತರಕಾರಿ ಉಪ್ಪಿಟ್ಟು ತನ್ನ ಹೆಸರನ್ನು ಬದಲಿಸಿಕೊಳ್ಳುವದೇ ಒಳ್ಳೆಯದು, ಇಲ್ಲದಿದ್ದರೆ ಅಲ್ಪ-ಸ್ವಲ್ಪ ಜನ ತನ್ನನ್ನು ಇಷ್ಟಪಡುವವರಿದ್ದಾರೋ ಅವರೂ ಕೂಡ ತನ್ನನ್ನು ದ್ವೇಷಿಸಬಹುದೆಂದು, ಅದು ತನ್ನ ಹೆಸರನ್ನು, ತರಕಾರಿ ಉಪ್ಪಿಟ್ಟಿನಿಂದ - ಬಟಾಟಿ, ಬೀನ್ಸ್, ಗಜ್ಜರಿ, ವಟಾಣಿ ಉಪ್ಪಿಟ್ಟು ಎಂದಿಟ್ಟುಕೊಂಡಿತು. ಹೆಸರು ಸ್ವಲ್ಪ ಉದ್ದವಾಯಿತಷ್ಟೆ, ಆದರೆ ಸಿದ್ಧನಿಂದ ಹೋಗುತ್ತಿದ್ದ ತನ್ನ ಶೀಲವನ್ನು ಕಾಪಾಡಿಕೊಂಡಿತು. ಕಾರಣ ಇಷ್ಟೇ ಸಿದ್ದ ತರಕಾರಿ ಉಪ್ಪಿಟ್ಟಿನ ಹೆಸರಲ್ಲಿ, ಉಪ್ಪಿಟ್ಟಿಗೆ ಬೆಂಡೆಕಾಯಿ ಹಾಕುತ್ತಿದ್ದರು. ಅವರ ಜೊತೆ ಕೆಲಸ ಮಾಡುತ್ತಿದ್ದ ಒಂದೇ ಒಂದು ಕಾರಣಕ್ಕೆ ಪಾಪ ಆ ಉಪ್ಪಿಟ್ಟು ತಿಂದ ಒಬ್ಬ ಸಹೋದ್ಯೋಗಿ, ಮುಂದೆಂದೂ ತರಕಾರಿ ಉಪ್ಪಿಟ್ಟನ್ನು ಮುಟ್ಟುವದೆ ಇಲ್ಲ ಅಂತ ಶಪಥ ಮಾಡಿಬಿಟ್ಟಳು...
ಹೇಳುತ್ತಾ ಹೋದರೆ ಇದು ಮುಗಿಯದ ಕಥೆ. ಬರೆದು ನನಗೆ ಸುಸ್ತಾಗಬಹುದು, ಓದಿ ನಿಮಗೆ ಸಾಕಾಗಬಹುದು ಆದರೆ ನಮ್ಮ ಸಿದ್ಧನಿಗೆ ಮಾಡಿ ಬೇಜಾರು ಕೂಡ ಆಗಲ್ಲ.....