ನಾನು ಸಣ್ಣವಳಿದ್ದಾಗ ಯಾರಾದ್ರೂ ಹಂಗ ಮಾಡ್ಬಾರ್ದು, ಹಿಂಗ ಮಾಡ್ಬಾರ್ದು ಅಂತ ಹೇಳಿದಾಗ ನನ್ನ ಸಹಜವಾದ ಪ್ರಶ್ನೆ ಯಾಕೆ ಅಂತ ಅವರು ಎದುರಿಸಬೇಕಾಗಿತ್ತು. ಕೆಲವೊಂದಿಷ್ಟು ಜನ ಅದಕ್ಕೆ ಹೊಂದುವ ಉತ್ತರ ಕೊಟ್ರ, ಇನ್ನು ಕೆಲವು ಜನ ಯಾಕಂದ್ರ ದೊಡ್ಡವರ ಹೇಳ್ಯಾರ್ ಅದಕ ಅಂತಿದ್ದರು. ಅದ್ರ ಸರಿ ಕಾರಣ ಇರ್ಲಾರ್ದ ಏನರ ಅನುಸರಿಸು ಅಂದ್ರ ನನಗ ಟ್ರಸ್ ಆಗ್ತೇತಿ. ಅದ್ಯಾಕ ಹಂಗ ಅಂತ ತಿಳ್ಕೊಳೋ ವರೆಗೂ ಸಮಾಧಾನ ಆಗಲ್ಲ. ಈ ಕಾರಣಕ್ಕಾಗೇ ಎಲ್ಲರೂ ನಂಗ ಮೊಂಡು ಹುಡಗಿ, ಹೇಳಿದ್ ಅರ್ಥ ಮಾಡ್ಕೊಳಂಗಿಲ್ಲ, ಉಲ್ಟಾ ಪ್ರಶ್ನೆ ಮಾಡತಾಳ ಅಂತ ಬೈತಾರ್.
ಆದರೆ ಯೋಚನೆ ಮಾಡಿ ನೋಡಿದ್ರ ಪ್ರಶ್ನೆ ಮಾಡೋದು ತಪ್ಪಲ್ಲ, ತಿಳ್ಕೊಳೋ ಕುತೂಹಲ ಇರೋದಕ್ಕ ಪ್ರಶ್ನೆ ಮಾಡ್ತಾರ. ನಾವು ಮಾಡೋ ಪ್ರತಿ ಕೆಲಸಕ್ಕೂ ಒಂದು ಕಾರಣ/ಉದ್ದೇಶ ಇದ್ದ ಇರತೇತಿ. ಅದನ ತಿಳ್ಕೋಲಾರ್ದ ಮಾಡತೇವಿ ಅಂದ್ರ ಇದರರ್ಥ ಬ್ಯಾರೆದವರ ಮಾತ ಕೇಳತೀವಿ. ಸ್ವಂತ ಬುದ್ಧಿ ತೆಗ್ಗ ತಗದ ಮುಚ್ಚಿ ಇಟ್ಟೇವಿ ಅಂದಂಗ. ಉದಾಹರಣೆಗೆ ಒಂದ ಸಣ್ಣ ಕಥೆ ಹೇಳ್ತೇನಿ ಕೇಳ್ರಿ. ಇದೇನರ ಚಲೋ ಅನಸಿದ್ರ ಮುಂದ ಓದಬಹುದು.
“ಒಂದ ಗುರುಕುಲದಾಗ ವಿದ್ಯಾರ್ಥಿಗಳಿಗೆ ಗುರುಗಳು ಪಾಠ ಹೇಳಾಕತ್ತಿದ್ರು. ಆ ಗುರುಕುಲದಾಗ ಒಂದ ಬೆಕ್ಕನ್ನ ಸಾಕಿದ್ರು. ಆ ಬೆಕ್ಕು ಪಾಠಕ್ಕ ಕುಳಿತ ವಿದ್ಯಾರ್ಥಿಗಳಿಗೆ ಕಾಟ ಕೊಡಾಕತ್ತಿತ್ತು. ಆ ಕಾರಣಕ್ಕ ಗುರುಗಳು ಪಾಠ ಮುಗಿಯೋವರೆಗೆ ಬೆಕ್ಕನ್ನ ಬುಟ್ಟಿ ಹಾಕಿ ಮುಚ್ಚಿ, ಪಾಠ ಮುಗಿದ ಮ್ಯಾಲೆ ಮತ್ತೆ ಬೆಕ್ಕಿನ ಹೊರಗ ಬಿಡಾಕ ಹೇಳಿದ್ರು. ದಿನ ಇದ ಪದ್ಧತಿ ಮುಂದವರಿತ.
ಸಮಯ ಕಳೀತು, ಗುರುಗಳು ತೀರಿ ಹೋದ್ರು, ಹಳೆ ವಿದ್ಯಾರ್ಥಿಗಳು ಮನೆಗೆ ಹೋದ್ರು, ಹೊಸ ಗುರುಗಳು ಬಂದ್ರು, ಹೊಸ ವಿದ್ಯಾರ್ಥಿಗಳು ಬಂದ್ರು, ಬೆಕ್ಕು ಸತ್ತೋಯ್ತು. ಈಗ ಇವರಿಗೆ ಮೊದಲಿದ್ದವರ ಪದ್ಧತಿ ಮುಂದುವರೆಸೋದಿತ್ತು. ಆ ಕಾರಣಕ್ಕ ಈಗಿನ ಶಿಸ್ಷ್ಯಂದಿರು ಹೋಗಿ ಒಂದು ಬೆಕ್ಕಿನ ಮರಿಯನ್ನ ತಂದ್ರು. ಅದನ ಬುಟ್ಟೀಲಿ ಹಾಕಿ ಮುಚ್ಚಿಟ್ಟು ಪಾಠ ಕೇಳೋದಕ್ಕೆ ಶುರು ಮಾಡಿದ್ರು. ಕಾರಣ ಕೇಳಿದ್ರ ಮೊದಲಿದ್ದ ಗುರುಗಳು ಮಾಡಿದ ಪದ್ಧತಿ ಅದನ ಪಾಲಿಸೋದು ನಮ್ಮ ಕರ್ತವ್ಯ ಅಂದ್ರು.”
ಈಗ ವಿಷಯಕ್ಕ ಬರೋನು, ಬೆಕ್ಕು ಕಾಟ ಕೊಟ್ಟಿದ್ದಕ್ಕ ಬುಟ್ಯಾಗ್ ಹಾಕಿದ್ದ, ಆ ಸಮಯ ಸಂದರ್ಭಕ್ಕ ತಗೊಂಡಿರೋ ವಾಸ್ತವಿಕ ನಿರ್ಧಾರ. ಅದಕ್ಕ ಅರ್ಥ ಅಯ್ತಿ, ಇದ ಪದ್ಧತಿ ಅಂತ ಇರ್ಲಾರ್ದ ಬೆಕ್ಕನ್ನ ತಗೊಂಡ್ ಬಂದ ಬುಟ್ಟ್ಯಾಗ ಹಾಕೋದು ಎಷ್ಟರ ಮಟ್ಟಿಗೆ ಸರಿ...!! ಹಿರ್ಯಾರು ಹೇಳಿದರು ಅಂತ ಪಾಲಸೋಕಿಂತ ಮುಂಚೆ ಯಾವ ಸಮಯದಾಗ, ಯಾವ ಸಂದರ್ಭದಾಗ ಅವರು ಇದನ್ನ ಯಾಕ ಹೇಳಿದರು ಅನ್ನೋದ ತಿಳ್ಕೊಂಡು ಮುಂದ ಇದನ್ನ ಅನುಸರಿಸೋದೋ ಅಥವಾ ಬಿಡೋದೋ ನಿರ್ಧಾರ ಮಾಡ್ಬೇಕಾಗಿದ್ದ ನಮ್ಮ ನಿಮ್ಮಂತ ಬುದ್ಧಿವಂತರ ಕೆಲಸ. ಒಂದಿಷ್ಟು ಹೇಳಿಕೆಗಳನ್ನ ಕೆಳಗಡೆ ಬರ್ದಿದಿನಿ, ನನಗ ಅರ್ಥ ಆದಷ್ಟು ಮಟ್ಟಿಗೆ ವಿವರಣೆ ಕೊಟ್ಟೇನಿ. ನೀವು ಓದಿದ ಮ್ಯಾಲೆ ನಿಮಗೇನಾದರೂ ಬೇರೆ ಗೊತ್ತಿದ್ರ ಕಾಮೆಂಟ್ ಮಾಡಿ ಹೇಳ್ರಿ.
೧) ಬಹಳ ಪ್ರಸಿದ್ಧವಾಗಿದ್ದ ಹೇಳಿಕೆ ಅಂದ್ರ, ಬೆಕ್ಕು ಅಡ್ಡ ಹೋದ್ರ ಸ್ವಲ್ಪ ಹೊತ್ತು ನಿಂತ ಆಮೇಲೆ ಹೋಗ್ಬೇಕ. ಇದನ್ನ ಯಾವ ಸಂದರ್ಭದಾಗ ಹೇಳಿದ್ರು, ಯಾಕ ಹೇಳಿದ್ರು ಅಂತ ವಿಶ್ಲೇಷಣೆ ಮಾಡಿದಾಗ, ತಿಳ್ಕೊಬೇಕಾಗಿದ್ದು ಏನ್ ಅಂದ್ರ, ಮೊದ್ಲು ಜನ ಕುದರೆ ಮೇಲೆ, ಎತ್ತಿನ ಬಂಡಿಯಲ್ಲಿ, ಪ್ರಯಾಣ ಮಾಡತಿದ್ರು. ದಾರಿ ಕಾಡು, ಗುಡ್ಡ ಬೆಟ್ಟಗಳ ನಡುವ ಇರ್ತಿತ್ತು. ಕೆಲವೊಮ್ಮೆ ಕತ್ತಲಾದಾಗ ದೊಂದಿ ಇಟ್ಕೊಂಡ್ ಹೋಗ್ತಿದ್ರು. ಕಾಡು ಪ್ರಾಣಿಗಳು, ಕಾಡು ಬೆಕ್ಕು ದಾರಿಗೆ ಅಡ್ಡ ಬಂದಾಗ ಅವುಗಳ ಹೊಳಿಯುವ ಕಣ್ಣ ನೋಡಿ, ಕುದರಿ, ದನಗೋಳ ಬೆದರಿ ಅಡ್ಡ-ತಿಡ್ಡಿ ಹೋಗ್ತಾವ್ ಅಂತ ಸ್ವಲ್ಪ ಹೊತ್ತು ನಿಂತ ಕುದರೆ/ಎತ್ತು ಸಮಾಧಾನ ಅದ್ಮ್ಯಾಲೆ ಮತ್ತ ಪ್ರಯಾಣ ಮುಂದ ವರಸತಿದ್ರು. ಕೆಲವಂದಿಷ್ಟು ಜನ ಕಲ್ಲು ಒಗದ ಪ್ರಾಣಿ ಹೋಯ್ತಿಲ್ಲೋ ಅಂತ ಗೊತ್ತಮಾಡಿಕೊಂಡ ಮುಂದ ಹೋಗ್ತಿದ್ರು. ಈಗ ಬೆಕ್ಕ ಹಗಲೊತ್ತ ಅಡ್ಡ ಹೋದ್ರ ಕಲ್ಲಒಗದ ಮುಂದ ಹೋಗ್ತಾರ. ಯಾಕ ಅಂತ ಅವರಿಗೂ ಗೊತ್ತಿಲ್ಲ. ಹಿರ್ಯಾರ್ ಹೇಳ್ಯಾರಿ ಮಾಡ್ಬೇಕ.
೨) ಸಂಜೆ ಹೊತ್ತು ಕಸ ಹೊರಗ ಹಾಕ್ಬಾರ್ದು, ಲಕ್ಷ್ಮಿ ಹೊರಗ ಹೋಗ್ತಾಳ. ಇದನ್ನ ಹಿರಿಯರು ಹೇಳಿದಾಗ, ಥಾಮಸ್ ಎಡಿಸನ್ ಬಲ್ಬ್ ಕಂಡ ಹಿಡದಿರ್ಲಿಲ್ಲ, ಚಿಮಣಿ ಬುಡ್ಡಿ ಬೆಳಕಾದಾಗ ರಾತ್ರಿ ಕಸದ ಜೊತಿ ಏನಾದ್ರು ತುಟ್ಟಿ ಸಾಮಾನ ಹೊರಗ ಹೋಗ್ತೇತಿ ಅನ್ನೋ ಕಾರಣಕ್ಕ ಹಂಗ ಹೇಳಿದಾರ. ಈಗ LED ಬಲ್ಬ್ ಹಾಕಿನು ಮನ್ಯಾಗ ಕಸ ಇಟ್ಕೊಂಡ್ ಮಲಗೋದು ಎಷ್ಟರ ಮಟ್ಟಿಗೆ ಸರಿ!
೩) ಹೊತ್ತ ಮುಣಗಿದ ಮ್ಯಾಲೆ ಉಗುರು ತಗಿಬಾರ್ದು, ಯಾಕಂದ್ರ ಮದ್ಲ ಕರೆಂಟ್ ಇರ್ಲಿಲ್ಲ, ಬ್ಲೇಡ್ ಅಥವಾ ಯಾವದರ ಹರಿತವಾದ ವಸ್ತು ಇಂದ ಕತ್ಲದಾಗ ಕೈ ಗೆ ನೋವು ಮಾಡ್ಕೊಬಾರದಂತ ಹಿರಿಯರು ಇದನ್ನ ಹೇಳಿದ್ರು. ಆದ್ರ ಈಗ್ಲೂ ಎಷ್ಟೊಂದ್ ಜನ ಉಗರ ತಕ್ಕೊಳಾಕ ಟೈಮ್ ಸಿಗಲಾರ್ದ ಅಡ್ಯಾಡತಾರ್ ಪಾಪ.
೪) ರಾತ್ರಿ ಊಟ ಆದ್ಮ್ಯಾಲೆ ಭಾಂಡೆ ಎಲ್ಲ ತೊಳೆದಿಟ್ಟು ಮಲಗಬಾರದು ಅಂತ ಹೇಳ್ತಾರ್. ಇದ್ಯಾಕ ಅಂತ ಯೋಚನೆ ಮಾಡಾಕಾತ್ರಿ, ಹೇಳ್ತೇನಿ ಕೇಳ್ರಿ, ಮೊದ್ಲು ಮಂದಿ ನೆಂಟರ ಮನಿಗೆ, ಸಂಬಂಧಿಕರ ಮನಿಗೆ ನಡ್ಕೊಂಡೋ, ಅಥವಾ ಎತ್ತಿನ ಬಂಡಿ ಇಲ್ಲ ಕುದರೆ ಮ್ಯಾಲೆ ಹೋಗ್ತಿದ್ರು. ರಾತ್ರಿ ಆದ ತಕ್ಷಣ ಯಾವ ಊರು ತಲುಪತಿದ್ರೋ ಅಲ್ಲಿ ತಮ್ಮ ಜಾತಿ ಮಂದಿ ಮನ್ಯಾಗ ಉಳ್ಕೊತಿದ್ರು. ಅದಕ್ಕಾಗಿ ಹೇಳಿ ಕೇಳಿ ಬರಲಾರದ ಅತಿಥಿ ಉಪವಾಸ ಮಲಗಬಾರದು ಅಂತ ಒಬ್ಬರ ಪಾಲಿನ ಅಡಿಗಿ ಜಾಸ್ತಿ ಮಾಡಿ ಇಡ್ತಿದ್ರು. ಈಗ ಆದ್ಯಾಕ ಹಂಗ ಮಾಡ್ತಿದ್ರು ಅನ್ನೋ ಕರಣಾನು ಗೊತ್ತಿರಲಾರದ, ಕುಕ್ಕರದಾಗ ಸ್ವಲ್ಪ ಅನ್ನಉಳಸಿ ಅದನ್ನ ಮುಂಜಾನೆ ಚೆಲ್ಲಿ ಕುಕ್ಕರ ತೊಳೀತಾರ. ಇದ ನೆಪಾದಾಗ ರಾತ್ರಿ ಉಂಡಿದ್ದ ಭಾಂಡೆ ನು ತೊಳಿಲಾರ್ದ ಜೊಂಡಿಗ್ಯಾ ಸಾಕ್ತಾರ್ ಮನ್ಯಾಗ.
೫) ಹೊಸ್ತಿಲ ಮ್ಯಾಲೆ ನಿತ್ಕೊಂಡ್ ಸೀನಬಾರ್ದು ಅಂತಾರ. ಯಾಕಂದ್ರ ಮೊದಲಿನ ಮನಿ ಬಾಗ್ಲ ಸಣ್ಣು ಇರ್ತಿದ್ದು. ಸೀನೋವಾಗ ಹೊಸ್ತಿಲಿಗೆ ತಲಿ ಬಡದ್ ನೋವಾಗಬಾರ್ದ ಅಂತ ಹಂಗ ಹೇಳ್ತಿದ್ರು.
ಹಾಗಂತ ಮೊದಲು ಮಾಡಿದ ಪದ್ಧತಿಗಳಿಗೆ ಅರ್ಥ ಇಲ್ಲ ಅಂತ ನಾನು ಹೇಳಂಗಿಲ್ಲ. ಪ್ರತಿಯೊಂದಕ್ಕೂ ಅರ್ಥ ಐತಿ. ಆದರ ಸಮಯ ಕೂಡ ಅಷ್ಟ ಮುಖ್ಯ ಐತಿ. ಮೇಲೆ ಹೇಳಿದ್ದು ಕೆಲವು ಅಷ್ಟೇ ಉದಾಹರಣೆಗಳು, ಹುಡುಕ್ಕೊಂತ ಹೋದ್ರ ಇನ್ನೂ ಭಾಳ ಅದಾವ.
ಹಕ್ಕು ನಿರಾಕರಣೆ: ಎಲ್ಲಾ ಚಿತ್ರಗಳನ್ನು ವೆಬ್ನಿಂದ ಪಡೆಯಲಾಗಿದೆ. ಬ್ಲಾಗ್ ಮಾಲೀಕರು / ಲೇಖಕರು ಈ ಚಿತ್ರಗಳ ಹಕ್ಕು ಸಾಧಿಸುವುದಿಲ್ಲ.